ಭರೂಚ್
ಭಾರತದ ಗುಜರಾತ್ ರಾಜ್ಯದ ಒಂದು ಜಿಲ್ಲೆ ಹಾಗೂ ಜಿಲ್ಲೆಯ ಆಡಳಿತ ಕೇಂದ್ರ ನಗರ. ಇದನ್ನು ಭರೂಚ್, ಬ್ರೋಚ್, ಬರೋಚ್ ಎಂಬುದಾಗಿ ಕರೆಯುವುದುಂಟು. ಮೊದಲು ಮುಂಬಯಿ ಪ್ರಾಂತ್ಯದ ಆಧಿಪತ್ಯಕ್ಕೆ ಸೇರಿದ್ದು 1956ರಲ್ಲಿ ರಾಷ್ಟ್ರ ಭಾಷಾವಾರು ಪುನರ್ವಿಂಗಡಣೆ ಆದಾಗ ಗುಜರಾತ್ ರಾಜ್ಯಕ್ಕೆ ಸೇರಿತು. ಗುಜರಾತ್ ರಾಜ್ಯದ ಪೂರ್ವಕ್ಕೆ ಹಾಗೂ ರಾಜಧಾನಿ ಗಾಂಧಿನಗರದ ದಕ್ಷಿಣಕ್ಕಿರುವ ಈ ಜಿಲ್ಲೆಯನ್ನು ದಕ್ಷಿಣದಲ್ಲಿ ಸೂರತ್ ಉತ್ತರದಲ್ಲಿ ವಡೋದರಾ ಜಿಲ್ಲೆಗಳೂ ಪೂರ್ವದಲ್ಲಿ ಮಹಾರಾಷ್ಟ್ರ ರಾಜ್ಯವೂ ಪಶ್ಚಿಮದಲ್ಲಿ ಅರಬ್ಬಿ ಸಮುದ್ರದ ಕ್ಯಾಂಬೇ ಖಾರಿಯೂ ಸುತ್ತುವರಿದಿವೆ. ವಾಲಿಯ, ಸಗ್‍ಬರ, ಭಡೋಚ, ದೀದಿಯಪಾದ್, ನಂದೋದ್, ಜಗದಿಯಾ, ಅಮೋದ್ ಜಂಬುಸರ್, ವಾಗ್ರ, ಹನ್ಸಾಟ್ ಮತ್ತು ಅಂಕಲೇಶ್ವರ ತಾಲ್ಲೂಕುಗಳು. ಜಿಲ್ಲಾ ವಿಸ್ತೀರ್ಣ 9045 ಚಕಿಮೀ. ಜನಸಂಖ್ಯೆ 1.296,451 (1981). ನರ್ಮದಾ ಮತ್ತು ಕಿಮ್ ಈ ಜಿಲ್ಲೆಯ ಮುಖ್ಯ ನದಿಗಳು. ನರ್ಮದಾ ಜಿಲ್ಲೆಯ ಉತ್ತರದಲ್ಲಿ ಪಶ್ಚಿಮಾಭಿಮುಖವಾಗಿ ಹರಿದು ಭರೂಚ್ ಬಳಿಕ್ಯಾಂಬೇ ಖಾರಿಯನ್ನು ಸೇರಿಕೂಳ್ಳುತ್ತದೆ. ಕಿಮ್ ಜಿಲ್ಲೆಯ ದಕ್ಷಿಣದಲ್ಲಿ ಹರಿದು ಅದೂ ಕ್ಯಾಂಬೇ ಖಾರಿಯನ್ನು ಸೇರುವುದು. ನದೀ ಮುಖಜ ಭೂಮಿ ಫಲವತ್ತಾಗಿದೆ. ಹತ್ತಿ, ಗೋದಿ, ಬಾಜ್ರಾ, ತಂಬಾಕು, ನೆಲಗಡಲೆ ಬೆಳೆಸುತ್ತಾರೆ. ಅರಣ್ಯ ಸಂಪತ್ತು ಕಡಿಮೆ. ಮ್ಯಾಂಗನೀಸ್ ಗಣಿಗಳಿವೆ. ಬೆಲೆಬಾಳುವ ಕಲ್ಲುಗಳನ್ನು ತೆಗೆದು ಬೇಡಿಕೆ ಇರುವೆಡೆ ಕಳಿಸಿ ಕೂಡುತ್ತಾರೆ. ರಾಷ್ಟ್ರೀಯ ಹೆದ್ದಾರಿ ಹಾಗೂ ಪಶ್ಚಿಮ ರೈಲ್ವೆ ಸಂಪರ್ಕ ಜಿಲ್ಲೆಗೆ ಇದ್ದು ಇಲ್ಲಿಯ ವ್ಯಾಪಾರಾಭಿವೃದ್ಧಿಗೆ ಸಂಚಾರಕ್ಕೆ ಅನುಕೂಲ ಒದಗಿಸಿವೆ. ಭರೂಚ್ ಬಳಿ ನರ್ಮದಾ ನದಿಯ ಮೇಲೆ 67 ಕಮಾನುಗಳ ಕಬ್ಬಿಣದ ದೊಡ್ಡ ರೈಲು ಸೇತುವೆ ಕಟ್ಟಿದ್ದಾರೆ.

	ಭರೂಚ್ ನಗರ ಈ ಜಿಲ್ಲೆಯ ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ, ಮುಖ್ಯ ಬಂದರು ಮತ್ತು ವ್ಯಾಪಾರ ಕೇಂದ್ರ ಕೂಡ. ನರ್ಮದಾ ನದಿಯ ಬಲದಂಡೆಯ ಮೇಲಿದೆ. ಅರಬ್ಬಿ ಸಮುದ್ರಕ್ಕೆ 38 ಕಿಮೀ ಹಾಗೂ ವಡೋದರಾಕ್ಕೆ (ಬರೋಡ) 72 ಕಿಮೀ ದೂರದಲ್ಲಿದೆ. ಜನಸಂಖ್ಯೆ 120,524 (1981). ಇಲ್ಲಿ ಹತ್ತಿ ಬಿಡಿಸುವ ಹಾಗೂ ಬಟ್ಟೆ ತಯಾರಿಕೆಯ ಕಾರ್ಖಾನೆಗಳಿವೆ. ಕೈಮಗ್ಗದ ಬಟ್ಟೆ ತಯಾರಿಕೆಯೂ ಇದೆ. ಗಾಜಿನ ಸಾಮಾನುಗಳು, ಶಾಯಿ ತಯಾರಿಕೆಯುಂಟು. ಬಂದರಿನ ಮೂಲಕ ಗೋದಿ, ಹಂಚು, ಹತ್ತಿ ನಿರ್ಯಾತವಾಗುತ್ತವೆ. ನಗರದಲ್ಲಿ ಹಳೆಯ ಕೋಟೆ, ಮಸೀದಿ ಮುಂತಾದವುಗಳಿವೆ. ನಗರಕ್ಕೆ ಸುಮಾರು 16 ಕಿಮೀ ದೂರದಲ್ಲಿ ಭೃಗು ಮುನಿಯ ದೇವಾಲಯವಿದೆ. ಪುರಾಣಯುಗದಲ್ಲಿ ಈ ನಗರವನ್ನು ಭೃಗು ಋಷಿ ಮುನಿಯ ದೇವಾಲಯವಿದೆ. ಪುರಾಣಯುಗದಲ್ಲಿ ಈ ನಗರವನ್ನು ಭೃಗು ಋಷಿ ಸ್ಥಾಪಿಸಿದ ಕಾರಣ ಅದಕ್ಕೆ ಭೃಗುಪಟ್ಟಣ ಅಥವಾ ಭೃಗು ಕಚ್ಚ ಎಂಬ ಹೆಸರಿತ್ತೆಂದೂ ಟಾಲಿಮಿ ಇದನ್ನು ಬರಗೇಜ ಎಂದೂ ಕರೆದಿದ್ದಾನೆ. ಮಹಾಭಾರತದಲ್ಲಿ ಭೃಗು ಪಟ್ಟಣದ ಬಗ್ಗೆ ಉಲ್ಲೇಖವಿದೆ. ಚೀನೀ ಯಾತ್ರಿಕ ಹ್ಯೂಯನ್‍ತ್ಯಾಂಗನ ಪ್ರಾವಾಸ ಗ್ರಂಥದಲ್ಲಿ ಭರೂಚ್ ಬಗ್ಗೆ ಮಾಹಿತಿಗಳಿವೆ. 2ನೆಯ ಶತಮಾನದಲ್ಲಿ ಕ್ಷತ್ರಪರೂ 7ನೆಯ ಶತಮಾನದಲ್ಲಿ ಗುರ್ಜರರೂ ಆಳಿದ ತರುವಾಯ ನಗರ ಮುಸಲ್ಮಾನರ ಆಡಳಿತಕ್ಕೆ ಒಳಗಾಯಿತು. 1572ರಲ್ಲಿ ಈ ನಗರವನ್ನು ಅಕ್ಬರ್ ಗೆದ್ದುಕೊಂಡ 1685 ಮತ್ತು 1782ರ ನಡುವೆ ಮರಾಠರ ವಶದಲ್ಲಿತ್ತು. ಬ್ರಿಟಿಷರ ಆಳ್ವಿಕೆ 1782ರಲ್ಲಿ ಪ್ರಾರಂಭವಾಯಿತಾದರೂ ಮಧ್ಯೆ ಇದರ ಒಡೆತನ, ಆಳ್ವಿಕೆ ಬದಲಾಗುತಿತ್ತು. ಕೊನೆಗೆ 1803ರಲ್ಲಿ ಬ್ರಿಟಿಷ್ ಈಸ್ಟ್‍ಇಂಡಿಯಾ ಕಂಪನಿ ಆಡಳಿತಕ್ಕೆ ಸೇರಿಹೋಯಿತು. ಮುಂಬಯಿ ಪ್ರಾಂತ್ಯದಲ್ಲಿದ್ದ ಈ ರಾಜ್ಯ 1956ರಲ್ಲಿ ಅದು ಗುಜರಾತ್ ರಾಜ್ಯದ ಭರೂಚ್ ಆಡಳಿತಕೇಂದ್ರ ನಗರವಾಯಿತು.
(ವಿ.ಜಿ.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ